ಆಯುರ್ವೇದದ ನಡಿಗೆ ಸ್ವಾಸ್ಥ್ಯ ಬದುಕಿನೆಡೆಗೆ

ಆಯುರ್ವೇದದ ನಡಿಗೆ ಸ್ವಾಸ್ಥ್ಯ ಬದುಕಿನೆಡೆಗೆ

|| ನಮಾಮಿ ಧನ್ವಂತರೀಂ ಆದಿದೇವಂ ಸುರಾಸುರೈಃ ವಂದಿತ ಪಾದಪದ್ಮಂ
 ಲೋಕೆ ಜರರುಗ್‌ಭಯ ಮೃತ್ಯನಾಶಂ ದಾತಾರಮೀಷಂ ವಿವಿಧೌಷಧೀನಾಂ||

 

“ಲೋಕದಲ್ಲಿಯ ಜರಾ (ಮುಪ್ಪು), ಭಯ,ರುಜ (ವೇದನೆ ) ಮತ್ತು ಮೃತ್ಯುವನ್ನು ನಾಶಪಡಿಸಲು ವಿವಿಧ ಔಷಧಗಳನ್ನು ನೀಡಿದಂತಹ, ಸುರರು (ದೇವತೆಗಳು), ಅಸುರರಿಂದ (ರಾಕ್ಷಸರು) ಪಾದ ಕಮಲಗಳಿಗೆ ವಂದಿಸಲ್ಪಟ್ಟಂತಹ, ದೇವಾನುದೇವತೆಗಳಿಗೆ ಆದಿದೈವನಾದ ಧನ್ವಂತರೀ ದೇವತೆಗೆ ಭಕ್ತಿಪೂರ್ವ ನಮನಗಳು” ಎಂಬುದು ಮೇಲಿನ ಸಂಸ್ಕೃತ ಶ್ಲೋಕದ ವಿವರಣೆ.
ize: 18px;”>ಮನುಷ್ಯ ಧರ್ಮ, ಅರ್ಥ, ಕಾಮ ಹಾಗೂ ಮೋಕ್ಷವನ್ನು ಪಡೆಯುವುದಕ್ಕೆ ಆರೋಗ್ಯವು ಬಹಳ ಪ್ರಮುಖವಾದ ವಿಚಾರ. ಆರೋಗ್ಯಕ್ಕೆ ಆಯುರ್ವೇದವು ಸಾಧನವಾಗಿದೆ. ೫೦೦೦ ವರ್ಷಗಳ ಹಿನ್ನೆಲೆಯುಳ್ಳ ಈ ವೈದ್ಯಕೀಯ ವಿಜ್ಞಾನಕ್ಕೆ ಅನಾದಿ ಕಾಲದಿಂದಲೂ ಭಾರತದಲ್ಲಿ ಪ್ರಾಶಸ್ತ್ಯ ದೊರಕಿದೆ. ಬ್ರಿಟಿಷರ ಕಾಲದಲ್ಲಿ ಅವರ ದಬ್ಬಾಳಿಕೆಯಿಂದಾಗಿ ನೇಪಥ್ಯಕ್ಕೆ ಸರಿದಿದ್ದ ಆಯುರ್ವೇದ ಇಂದು ತನ್ನ ಅಸ್ತಿತ್ವ ಉಳಿಸಿಕೊಳ್ಳಲು ಪ್ರಯತ್ನಶೀಲವಾಗಿದೆ.
‘ಶಂಖದಿಂದ ಬಂದರೆ ತೀರ್ಥ’ ಎಂಬ ನಾಣ್ನುಡಿಯಂತೆ ಆಯುರ್ವೇದ ವೈದ್ಯ ಪದ್ಧತಿ ಬಗ್ಗೆ ನಮ್ಮ ಜನರು ಒಲವು ಬೆಳೆಸಿಕೊಳ್ಳುತ್ತಿದ್ದಾರೆ. ಪಾಶ್ಚಾತ್ಯರು ಈ ವಿಜ್ಞಾನದ ಬಗ್ಗೆ ಅತೀ ಹೆಚ್ಚಿನ ಆಸ್ಥೆ ತೋರಿಸುತ್ತಿರುವ ಹಿನ್ನೆಲೆಯಲ್ಲಿ ನಮ್ಮವರು ಈಗ ಕುತೂಹಲ ದೃಷ್ಟಿ ಬೀರುತ್ತಿದ್ದಾರೆ. ನಮ್ಮ ಪಾರಂಪರಿಕ ಜ್ಞಾನದ ಬಗ್ಗೆ ಬೇರೆಯವರಿಂದ ಹೇಳಿಸಿಕೊಳ್ಳಬೇಕಾದುದ್ದು ವಿಪರ್ಯಾಸವೇ ಸರಿ.
ಸ್ವಸ್ಥನ (ಆರೋಗ್ಯವಂತನ) ಆರೋಗ್ಯ ರಕ್ಷಣೆ ಮತ್ತು ರೋಗಿಯ ರೋಗ ಶಮನವೇ ಈ ಆಯುರ್ವೇದದ ಮುಖ್ಯ ಉದ್ದೇಶ. ‘ರೋಗವನ್ನು ಗುಣಪಡಿಸಿಕೊಳ್ಳುವುದಕ್ಕಿಂತ ರೋಗದ ನಿರ್ಬಂಧವೇ ಸೂಕ್ತ’ ( Prevention is better than cure) ಎನ್ನುವಂತಹ ವಿಚಾರ ಪ್ರತಿಯೊಬ್ಬರಿಗೂ ವೇದ್ಯವಾಗಿದೆ. ಹಾಗಾಗಿ ಇದಕ್ಕೆ ಸಹಕಾರಿಯಾಗುವಂತೆ ನಮ್ಮದೇ ಆದ ಆಯುರ್ವೇದದಲ್ಲಿ ಹೇಳಿರುವಂತಹ ಆರೋಗ್ಯವಂತರ ಆರೋಗ್ಯ ರಕ್ಷಣೆಯ ಬಗ್ಗೆ ಕೆಲವೊಂದು ಪ್ರಮುಖ ವಿಚಾರಗಳ ಬಗ್ಗೆ ಬೆಳಕು ಚೆಲ್ಲುವ ಪ್ರಯತ್ನವನ್ನು ಮಾಡುತ್ತಿದ್ದೇನೆ. ಈ ಹೊತ್ತಿನ ಯಾಂತ್ರಿಕ ಜೀವನದಿಂದಾಗಿ ಈ ವಿಚಾರಕ್ಕೆ ಬಹಳ ಮಹತ್ವವಿದೆ ಎಂಬುದು ನಿಮಗೆ ತಿಳಿಯದ ವಿಷಯವೇನೂ ಅಲ್ಲ.
ಶರೀರದ ಆರೋಗ್ಯವನ್ನು ಕಾಪಾಡಿಕೊಳ್ಳುವುದಕ್ಕೆ ವ್ಯಕ್ತಿಯ ವೈಯಕ್ತಿಕ ಜೀವನವು ಬಹಳ ಪ್ರಮುಖ ಪಾತ್ರ ವಹಿಸುತ್ತದೆ. ಪ್ರತಿಯೊಬ್ಬರು ಈ ವಿಚಾರವನ್ನು ಅಳವಡಿಸಿಕೊಂಡಲ್ಲಿ ರೋಗ ರುಜಿನಗಳಿಂದ ದೂರವಿದ್ದು ಆರೋಗ್ಯವನ್ನು ಕಾಪಾಡಿಕೊಳ್ಳಬಹುದು. ಇದಕ್ಕಾಗಿ ಆಯುರ್ವೇದದಲ್ಲಿ ‘ಸ್ವಸ್ಥ ವೃತ್’ ಎನ್ನುವ ವಿಷಯಕ್ಕೆ ಅತೀ ಹೆಚ್ಚಿನ ಮಹತ್ವವನ್ನು ಕೊಟ್ಟು ವಿಶ್ಲೇಷಿಸಲಾಗಿದೆ. ಈ ವಿಷಯದಲ್ಲಿ ಮನುಷ್ಯನು ತನ್ನ ಆರೋಗ್ಯವನ್ನು ರಕ್ಷಿಸಿಕೊಳ್ಳಲು ಬೇಕಾದಂತಹ ಆಚಾರ, ವಿಚಾರ ಮತ್ತು ಆಹಾರ ಕ್ರಮಗಳ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಒಳಗೊಂಡಿದೆ. ‘ದಿನಚರ್ಯ’,‘ರಾತ್ರಿಚರ್ಯ’ ಮತ್ತು ‘ಋತುಚರ್ಯ’ವೆಂಬ ಕಾಲಗಳ ಆಧಾರದ ಮೇಲೆ ಮತ್ತು ಸಹಜೀವನ, ಸಾಮಾಜಿಕ ತತ್ವ, ಸಂಸ್ಕೃತಿಗಳನ್ನು ಬಿಂಬಿಸುವಂತಹ ‘ಸದ್ವೃತ್ತಿ’ಯನ್ನು ಈ ವಿಷಯದಲ್ಲಿ ಪ್ರಸ್ತಾಪಿಸಲಾಗಿದೆ.
ದಿನಚರ್ಯದಲ್ಲಿ ಬ್ರಾಹ್ಮ ಮುಹೂರ್ತದಿಂದ (ಸೂರ್ಯೋದಯಕ್ಕೆ 2 ಮುಹೂರ್ತದ ಮುಂಚೆ ; ಒಂದು ಮುಹೂರ್ತ = 48 ನಿಮಿಷಗಳು) ಪ್ರಾರಂಭವಾಗಿ ಸೂರ್ಯಾಸ್ತದವರೆಗೆ ನಡೆಯುವಂತಹ ಚರ್ಯಗಳನ್ನು ವಿವರಿಸಲಾಗಿದೆ. ನಿರೋಗಿಯು ಬ್ರಾಹ್ಮ ಮುಹೂರ್ತದಲ್ಲಿ ನಿದ್ರೆಯಿಂದ ಏಳುವುದರಿಂದ ಮನಸ್ಸು ಹೆಚ್ಚು ಪ್ರಸನ್ನತೆಯನ್ನು ಹೊಂದಿರುತ್ತದೆ. ಹೆಚ್ಚು ಲವಲವಿಕೆಯಿಂದ ಮೈ ಹಗುರವಾಗಿಯೂ ಇರುತ್ತದೆ. ಈ ಸಮಯದಲ್ಲಿ ಇಷ್ಟ ದೇವತಾ ಪ್ರಾರ್ಥನೆಯನ್ನು ಮಾಡುವುದರಿಂದ (ಆಸ್ತಿಕರಿಗೆ) ಮನಸ್ಸು ಚಂಚಲತೆಯಿಂದ ಇಲ್ಲದೆ ನಿರ್ಮಲವಾಗುವುದು. ಅಲ್ಲದೆ, ಆ ದಿನದ ಕೆಲಸ ಕಾರ್ಯಗಳನ್ನು ಅತ್ಯಂತ ಆನಂದದಿಂದ ಮಾಡಬಹುದು. ಒಳ್ಳೆಯ ಮನಸ್ಸಿನಿಂದ ಮಾಡಿದ ಕೆಲಸಗಳು ಒಳ್ಳೆಯ ಪ್ರತಿಫಲವನ್ನು ತರುತ್ತವೆ.
ಪ್ರಾರ್ಥನೆಯ ನಂತರ ಶೌಚಕಾರ್ಯಗಳ ಕಡೆ ಗಮನಕೊಡಬೇಕು. ಆರೋಗ್ಯ ರಕ್ಷಣೆಯಲ್ಲಿ ಅಂತರ್ಶುದ್ಧಿ ಮತ್ತು ಬಹಿರ್ಶುದ್ಧಿ ಬಹಳ ಪ್ರಮುಖವಾದವು. ಆಯಾ ಹೊತ್ತಿಗೆ ಸರಿಯಾಗಿ ಮಲಮೂತ್ರ ವಿಸರ್ಜನೆಗಳನ್ನು ಮಾಡಬೇಕು. ಯಾವ ಕಾರಣಕ್ಕೂ ಮಲಮೂತ್ರವನ್ನು ತಡೆಯುವುದು ಅಥವಾ ಬಲವಂತದಿಂದ ಹೊರಹಾಕುವುದು ಮಾಡಬಾರದು. ವೇಗಧಾರಣೆ ಮಾಡುವುದರಿಂದ ರೋಗೋತ್ಪತ್ತಿಯಾಗುವುದು. ಅತೀ ಕ್ರೂರ ಕೊಷ್ಟವುಳ್ಳವರು (ಮಲಬದ್ಧತೆ ಇರುವವರು) ಸ್ನಿಗ್ಧ ಆಹಾರ ಸೇವಿಸುವುದರಿಂದ ಮಲವು ಸುಲಭವಾಗಿ ವಿಸರ್ಜನೆಯಾಗುತ್ತದೆ. ನಂತರ ಕೈಕಾಲು ಮುಖವನ್ನು ಶುದ್ಧ ನೀರಿನಲ್ಲಿ ತೊಳೆದು ದಂತಧಾವನವನ್ನು (ಹಲ್ಲು ಉಜ್ಜುವುದು ) ಮಾಡಬೇಕು.
ಬಹಿರ್ಶುದ್ಧಿಯಲ್ಲಿ ದಂತಧಾವನ ಬಹಳ ವಿಶಿಷ್ಟವಾದ ಸ್ಥಾನ ಪಡೆದಿದೆ. ಹಿಂದಿನ ರಾತ್ರಿ ಸೇವಿಸಿದಂತಹ ಆಹಾರವು ಜೀರ್ಣವಾಗಿದೆಯೋ ಇಲ್ಲವೋ ಎಂದು (ಅಜೀರ್ಣವುಳ್ಳವರು ದಂತಧಾವನಕ್ಕೆ ಅನರ್ಹರು) ತಿಳಿದು ಮಲಮೂತ್ರ ಶೌಚಗಳನ್ನು ಪೂರ್ಣಗೊಳಿಸಿ ಮುಖವನ್ನು ತೊಳೆದ ನಂತರ ದಂತ ಧಾವನಕ್ಕೆ ಅಣಿಯಾಗಬೇಕು. ಈ ಚರ್ಯೆಯಲ್ಲಿ ಕಟು (ಖಾರ), ತಿಕ್ತ (ಕಹಿ) ಅಥವಾ ಕಷಾಯ (ಒಗರು) ರಸಗಳುಳ್ಳ (ಆರು ರಸಗಳ ಪೈಕಿ) ಒಂದು ಅಂಗುಲ (ಸಾಮಾನ್ಯವಾಗಿ ೩-೪ ಇಂಚು ಉದ್ದ ) ಉದ್ದವಿರುವ ಕಾಷ್ಠಗಳನ್ನು (ಕಡ್ಡಿಗಳನ್ನು) ಉಪಯೋಗಿಸಬೇಕು. ಉಜ್ಜುವ ಭಾಗ ಕಿರುಬೆರಳಿನಷ್ಟು ದಪ್ಪವಿರಲಿ. ಈ ಕಡ್ಡಿಯ ಉಜ್ಜುವ ತುದಿಯನ್ನು ಹಲ್ಲಿನಿಂದ ಮೃದುವಾಗಿ ಅಗಿದು ಕುಂಚದಂತೆ (ಬ್ರಷ್) ಮಾಡಿ ಅವುಗಳಿಂದ ವಸುಡುಗಳಿಗೆ ಬಾಧೆಯಾಗದಂತೆ ಹಲ್ಲುಗಳ ಒಳ ಮತ್ತು ಹೊರಭಾಗಗಳನ್ನು ಉಜ್ಜಬೇಕು. ಬೆಳಗ್ಗೆ ಶೌಚದ ನಂತರ ಮತ್ತು ರಾತ್ರಿ ಮಲಗುವ ಮುನ್ನ ದಿನಕ್ಕೆರಡು ಬಾರಿ ದಂತಧಾವನ ಮಾಡುವುದರಿಂದ ಹಲ್ಲಿನ ಆರೋಗ್ಯವನ್ನು ಕಾಪಾಡಿಕೊಂಡು ಸದೃಢವಾಗಿಸಬಹುದು. ಮುಂದೆ ದಂತಧಾವನಕ್ಕೆ ಅರ್ಹರು, ಅನರ್ಹರು ಮತ್ತು ಅದಕ್ಕೆ ಬಳಸುವ ಕಾಷ್ಠಗಳ (ಕಡ್ಡಿಗಳ) ಬಗ್ಗೆ ವಿವರವಾಗಿ ತಿಳಿಯೋಣ.

Dr.Vedanth M S, B.A.M.S, DHA, MBA

E-mail: bhavedmysore@gmail.com
Mobile: +91 9916200341